ಅಕ್ಬರನ ಲೋಲುಪತೆಯೂ, ದೀನ್ ಇಲಾಹಿ ಎಂಬ ಪ್ರಹಸನವೂ…

ಅಕ್ಬರನ ಲೋಲುಪತೆಯೂ, ದೀನ್ ಇಲಾಹಿ ಎಂಬ ಪ್ರಹಸನವೂ…
ಅಕ್ಬರ್ ಎಲ್ಲ ದುಷ್ಟ ಪದ್ಧತಿಗಳಿಂದ ಸಾಮ್ರಾಜ್ಯವನ್ನು ಭದ್ರಪಡಿಸಿಕೊಂಡ ನಂತರ ತಾನು ದೈವಾಂಶಸಂಭೂತನೆಂದೂ ಸರ್ವಶಕ್ತನೆಂದೂ ನಂಬಲಾರಂಭಿಸಿದ. ತಾನೊಂದು ಹೊಸ ಮತವನ್ನು ಸ್ಥಾಪಿಸಬೇಕೆಂದೂ ಅದರಲ್ಲಿ ಎಲ್ಲ ಮತಗಳವರೂ ತಂತಮ್ಮ ಮೂಲಮತವನ್ನು ಮರೆತು ಒಂದಾಗಬೇಕೆಂದೂ ಕನಸು ಕಂಡ.

****

– ಬಾಬು ಕೃಷ್ಣಮೂರ್ತಿ

ಅಕ್ಬರ್ ಹದಿನಾಲ್ಕು ವಯಸ್ಸಿನ ಹುಡುಗನಾಗಿದ್ದಾಗ ತಂದೆ ತೀರಿಕೊಂಡ. ಅನಾಥವಾಗಿದ್ದ ರಾಜ್ಯ ಪರರ ಪಾಲಾಗುವ ಸನ್ನಿವೇಶ. ಆಗ ಬೆಂಬಲವಾಗಿ ನಿಂತು ಅವನನ್ನು ಸಿಂಹಾಸನದ ಮೇಲೆ ಕೂರಿಸಿದ ಸಂಪೂರ್ಣ ಶ್ರೇಯಸ್ಸು ಅವನ ಪೋಷಕ ಬೈರಾಂಖಾನ್​ಗೆ ಸಲ್ಲುತ್ತದೆ. ಅವನು ಮದುವೆಯಾಗಿದ್ದುದು ಅಕ್ಬರನ ಅತ್ತೆ(ತಂದೆಯ ತಂಗಿ)ಯ ಮಗಳು ಸಲೀಮಾ ಬೇಗಂಳನ್ನು. ಸುಂದರಿಯಾಗಿದ್ದ ಅವಳನ್ನು ಅಕ್ಬರ್ ಆಸೆಪಟ್ಟಿದ್ದ. ಆದರೆ ಅವನ ಆಸೆಗೆ ಬೈರಾಂಖಾನ್ ತಣ್ಣೀರು ಚೆಲ್ಲಿದ್ದ. ಇದರ ಪರಿಣಾಮವಾಗಿ ಆತನನ್ನು ಮುಗಿಸಿ ಹಾಕಲು ಅಕ್ಬರ್ ಹಲವು ಬಾರಿ ಪ್ರಯತ್ನಿಸಿದ್ದುಂಟು. ಅಕ್ಬರ್ ತನ್ನ ಅಂತರಂಗವನ್ನು ಬಿಟ್ಟುಕೊಡದೆ ಬೈರಾಂಖಾನನನ್ನು ಮೆಕ್ಕಾಗೆ ಕಳುಹಿಸುವ ನೆಪದಲ್ಲಿ ಸಾಗಹಾಕಿ 1561ರ ಜನವರಿಯಲ್ಲಿ ಗುಜರಾತ್​ನ ಸಿದ್ಧಾಪುರ ಪಟ್ಟನ್ ಎಂಬಲ್ಲಿ ಹಂತಕರಿಂದ ಕೊಲ್ಲಿಸಿದ. ಅತ್ತ ಬೈರಾಂಖಾನ್ ಸಾಯುತ್ತಿದ್ದಂತೆ ಅಕ್ಬರ್ ಅವನ ಹೆಂಡತಿ ಸಲೀಮಾ ಬೇಗಂಳನ್ನು ತನ್ನ ಜನಾನಾಗೆ ಸೇರಿಸಿ ಆಸೆ ಪೂರೈಸಿಕೊಂಡ. ಎಂಥ ಸುಕೋಮಲ ದಯಾಪರ ಸ್ವಭಾವ ಅವನದಾಗಿತ್ತು ನೋಡಿ!

ಅಕ್ಬರ್ ದಿ ಗ್ರೇಟ್ ಎಂದರೆ ಆದರ್ಶ ರಾಜ. ರಾಜ್ಯ ವಿಸ್ತರಣೆಗೆ ಅವನು ಅನುಸರಿಸಿದ ಹಾದಿಯನ್ನು ನೋಡಿ. ಸೈನ್ಯಬಲವನ್ನು ಬಳಸಿ ರಾಜ್ಯಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವುದು ಅವನ ಒಂದು ಪರಿ. ಇನ್ನೊಂದು, ರಾಜಪುಠಾಣದ ಎಲ್ಲ ರಾಜ ಮನೆತನಗಳಿಂದ ತಂದ ಹೆಣ್ಣುಮಕ್ಕಳನ್ನು ಮದುವೆಯಾಗಿ ತನ್ನ ಅಂತಃಪುರಕ್ಕೆ ದಾಖಲು ಮಾಡಿಕೊಳ್ಳುವುದು. ಮೇವಾಡ ಸಂಸ್ಥಾನ ಒಂದನ್ನು ಬಿಟ್ಟು ರಾಜಪುಠಾಣದ ಎಲ್ಲ ರಾಜ ಮನೆತನಗಳಿಂದ ರಜಪೂತ ಹೆಣ್ಣುಮಕ್ಕಳು ಅವನ ಜನಾನಾ ಸೇರಿದ್ದರು ಎಂದು ಇತಿಹಾಸ ಹೇಳುತ್ತದೆ.

1564ರಲ್ಲಿ ಅಕ್ಬರ್ ದಿಲ್ಲಿಯ ರಾಜಬೀದಿಗಳಲ್ಲಿ ಅಡ್ಡಾಡುತ್ತಿದ್ದಾಗ ಉಲಾದ್ ಎಂಬ ಗುಲಾಮ ಅವನ ಮೇಲೆ ಬಾಣ ಪ್ರಯೋಗ ಮಾಡಿ ತಾನೂ ಸೈನಿಕರ ಕತ್ತಿಗಳಿಗೆ ಬಲಿಯಾದ. ಅದನ್ನು ಮಾಡಿಸಿದವರು ಯಾರೆಂದು ತಿಳಿಯಲು ತನಿಖೆ ಮಾಡಬೇಕೆಂದು ಅಧಿಕಾರಿಗಳು ಸೂಚಿಸಿದಾಗ ಅಕ್ಬರನೇ ತಡೆದ. ಏಕೆ ತಡೆದಿದ್ದೆಂದು ವಿನ್ಸೆಂಟ್ ಸ್ಮಿತ್ ಹೀಗೆ ವಿವರಿಸಿದ್ದಾನೆ (Akbar The Great Mogul p.47): ‘‘ದಿಲ್ಲಿಯ ಕುಟುಂಬಗಳಿಗೆ ಸೇರಿದ ಕೆಲವು ಹೆಂಗಸರನ್ನು ಮದುವೆಯಾಗಬೇಕೆಂದು ಅಕ್ಬರ್ ಹುನ್ನಾರ ಹೂಡುತ್ತಿದ್ದ. ತಾನು ಮದುವೆಯಾಗಲು ಅನುವಾಗುವಂತೆ ನಿನ್ನ ಹೆಂಡತಿಗೆ ವಿಚ್ಛೇದನ ನೀಡು ಎಂದು ಒಬ್ಬ ಶೇಖ್​ನನ್ನು ಅವನು ಒತ್ತಾಯಿಸಿದ. ಈ ಹತ್ಯಾಪ್ರಯತ್ನದ ನಂತರ ಆ ನಾಚಿಕೆಗೇಡು ಯೋಜನೆಗಳು ಸ್ಥಗಿತಗೊಂಡವು. ಕುಟುಂಬಗಳ ಮರ್ಯಾದೆಯ ಮೇಲೆ ಚಕ್ರವರ್ತಿ ದುರಾಕ್ರಮಣ ಮಾಡಲು ಪ್ರಯತ್ನಿಸಿದ್ದರಿಂದ ಉಂಟಾದ ಕೋಪವೇ ಈ ಹತ್ಯಾಪ್ರಯತ್ನಕ್ಕೆ ಪ್ರೇರಣೆ ನೀಡಿತ್ತು. ಜೀವಿಸಿದ್ದಿಷ್ಟು ಕಾಲವೂ ಹೆಂಡತಿಯರು, ಉಪಪತ್ನಿಯರ ವಿಷಯದಲ್ಲಿ ಅಕ್ಬರ್​ಗೆ ಹೆಚ್ಚಿನ ದೌರ್ಬಲ್ಯ ಇತ್ತು’’.

ನೆಹರು ಸಹಿತವಾಗಿ ಅನೇಕ ಚರಿತ್ರೆಕಾರರು ಅಕ್ಬರ್​ನನ್ನು ಮಹಾನುಭಾವ, ಶ್ರೇಷ್ಠರಾಜ ಎಂದು ಹೊಗಳಿ ಮುಗಿಲೆತ್ತರಕ್ಕೇರಿಸುವುದುಂಟು. ಇದು ಬರೀ ಬೊಗಳೆ ಎಂಬುದು ಸತ್ಯಾನ್ವೇಷಣೆಯಿಂದ ರುಜುವಾತಾಗುತ್ತದೆ. ಜತೆಗೆ ಅವನು ಮಹಾಕಾಮುಕ ಎಂಬುದೂ ಸಾಬೀತಾಗುತ್ತದೆ. ಅದಕ್ಕೆ ಅವನು ರೂಪಿಸಿದ ಮೀನಾ ಬಜಾರ್ ಒಂದು ಉಜ್ವಲ ಉದಾಹರಣೆ.

ಅಕ್ಬರನ ದೃಷ್ಟಿಯಲ್ಲಿ ಹೆಣ್ಣೆಂದರೆ ಸಂತೆಯ ಮಾಲು. ತಾನು ಪ್ರಭುವಾದ್ದರಿಂದ ತನ್ನ ರಾಜ್ಯದಲ್ಲಿನ ಯಾವ ಸ್ತ್ರೀಯನ್ನಾದರೂ ಭೋಗಿಸುವ ಹಕ್ಕು ತನಗಿದೆ ಎಂಬ ದುರಹಂಕಾರ ಅವನದು. ರಾಜ್ಯದ ಉತ್ಕೃಷ್ಟ ಸುಂದರಿಯರನ್ನು ಕಲೆಹಾಕಿ ಅವರಲ್ಲಿ ತನಗಿಷ್ಟವಾದವರನ್ನು ಆಯ್ದುಕೊಳ್ಳಲು ಅವನು ರೂಪಿಸಿದ ವ್ಯವಸ್ಥೆಯೇ ಕುಪ್ರಸಿದ್ಧ ಮೀನಾ ಬಜಾರ್. ಇದು ಕೇವಲ ಹಿಂದು ಸುಂದರಿಯರಿಗಾಗಿಯೇ ಮೀಸಲಾಗಿತ್ತು. ಇದರಲ್ಲಿ ರಜಪೂತ ಮನೆತನಗಳವರೇ ಹೆಚ್ಚು.

ಹೊಸವರ್ಷವನ್ನು ಸ್ವಾಗತಿಸುವ ನೆವದಲ್ಲಿ ಅವನ ಅರಮನೆಯ ಸನಿಹವೇ ಆಯೋಜಿಸುತ್ತಿದ್ದ ಮೀನಾ ಬಜಾರ್​ನ ನೌರೋಜ್ ಉತ್ಸವದಂದು, ಹಿಂದು ಸಾಮಂತ ರಾಜರೆಲ್ಲ ತಲಾ ಒಂದೊಂದು ಮಳಿಗೆಯನ್ನು ತೆರೆದು ತಂತಮ್ಮ ರಾಜ್ಯಗಳಲ್ಲಿನ ಸುರಸುಂದರಿಯರನ್ನು ಅಲ್ಲಿ ಪ್ರದರ್ಶಿಸಬೇಕಿತ್ತು. ಆಗ ಖಾವಂದರು ಆಗಮಿಸಿ ತಮ್ಮ ಮನಸ್ಸಿಗೆ ಪಸಂದೆನಿಸಿದ ಹೆಣ್ಣುಗಳನ್ನು ತಮ್ಮ ಜನಾನಾಕ್ಕೆ ಅಟ್ಟಿಕೊಂಡು ಹೋಗುತ್ತಿದ್ದರು. ವಿಶಾಲ ಹೃದಯಿಯೂ ಈ ವಿಷಯದಲ್ಲಿ ನಿಸ್ವಾರ್ಥಿಯೂ ಆಗಿದ್ದ ಬಾದಷಹ ತಾನು ಅನುಭವಿಸಿ ಅಜೀರ್ಣವಾದಾಗ ತನಗೆ ಆಪ್ತರಾದ ಆಸ್ಥಾನ ಪ್ರಮುಖರಿಗೆ ಹೆಣ್ಣುಗಳನ್ನು ಉಡುಗೊರೆಯನ್ನಾಗಿ ವಿತರಿಸುತ್ತಿದ್ದ.

ತಾನು ಜಯಿಸಿ ವಶಪಡಿಸಿಕೊಂಡ ರಜಪೂತ ರಾಜವಂಶಗಳಿಂದ ಕನಿಷ್ಠ ಒಬ್ಬಳು ಕನ್ಯೆಯನ್ನು ಅಂತಃಪುರಕ್ಕೆ ಕಳುಹಿಸಬೇಕೆಂಬುದು ಅವನ ಅಲಿಖಿತ ಕಾನೂನು. ರಜಪೂತರನ್ನು ತನ್ನ ಅಂಕಿತದಲ್ಲಿಟ್ಟುಕೊಂಡು ನಿಯಂತ್ರಿಸುವ ಸಲುವಾಗಿ ಅವರ ಕುಟುಂಬಗಳಿಂದ ಹೆಣ್ಣುಗಳನ್ನು ತಂದು ತಾನೋ ಅಥವಾ ತನ್ನ ಕುಟುಂಬದವರೋ ಮದುವೆಯಾಗುವಂತೆ ಮಾಡುತ್ತಿದ್ದುದರಿಂದ ಅವನ ರಾಣಿವಾಸ ತುಂಬಿ ತುಳುಕಿ ನಿರಾಶ್ರಿತರ ಶಿಬಿರಗಳಂತೆ ಕಿಕ್ಕಿರಿದಿರುತ್ತಿತ್ತು. ಅಬುಲ್ ಫಜಲ್ ತನ್ನ ‘ಐನ್-ಇ-ಅಕ್ಬರಿ’ಯಲ್ಲಿ ಬಾದಷಹನ ಅಂತಃಪುರದಲ್ಲಿ 5,000 ರಾಣಿಯರಿದ್ದರೆಂದೂ ಅವರಿಗೆ ತಲಾ ಒಂದೊಂದು ಪ್ರತ್ಯೇಕ ಕೋಣೆ ಇತ್ತೆಂದೂ ಬರೆದಿದ್ದಾನೆ. ಆದರೆ ಇದು ಉತ್ಪ್ರೇಕ್ಷೆ ಎಂದು ತೋರುತ್ತದೆ. ಅಕ್ಬರನ ಕಾಲದಲ್ಲಿ 5,000 ಕೋಣೆಗಳ ರಾಜಮಹಲ್ ಯಾವುದೂ ಇರಲಿಲ್ಲವೆನ್ನುತ್ತಾರೆ ಚರಿತ್ರೆಕಾರರು. ಈ ಕುರಿತು ವಿನ್ಸೆಂಟ್ ಸ್ಮಿತ್ ಹೇಳುವುದನ್ನು ಕೇಳಿ; ‘‘….ಅಕ್ಬರ್ ತನ್ನ ಅಂತಃಪುರದಲ್ಲಿನ ನೂರಾರು ಸ್ತ್ರೀಯರನ್ನು ಆಸ್ಥಾನಿಕರಿಗೆ ಹಂಚಿರಬಹುದಾದ ಸಾಧ್ಯತೆಗಳಿವೆ. ದಾಖಲೆಗಳ ಪ್ರಕಾರ ನೋಡಿದರೆ ಅವನು ಒಬ್ಬಳು ಪತ್ನಿಗೇ ಸೀಮಿತಗೊಳ್ಳುವ ಆಸಾಮಿಯಾಗಿರಲಿಲ್ಲವೆಂಬುದು ಸ್ಪಷ್ಟವಾಗಿರುವ ಸಂಗತಿ’’ (Akbar The Great Mogul p.185).

ಮದುವೆ ಮಾಡಿ ಅಕ್ಬರನ ಅಂತಃಪುರಕ್ಕೆ ಸೇರಿಸಿದ ತಮ್ಮ ಹುಡುಗಿಯ ಗತಿ ಏನಾಗುತ್ತಿತ್ತೆಂಬುದು ಆಗ ಎಲ್ಲರಿಗೂ ಅರಿವಿದ್ದ ಸಂಗತಿಯೇ. ಅಕ್ಬರ್ ತನಗೆ ಬೇಡವೆನಿಸಿದಾಗ ಹೆಣ್ಣು ಮಕ್ಕಳನ್ನು ಆಸ್ಥಾನಿಕರಿಗೋ ಬಂಧುವರ್ಗದವರಿಗೋ ದಾನವಾಗಿ ಕೊಟ್ಟುಬಿಡುತ್ತಿದ್ದ. ಅಲ್ಲಿಗೆ ಸೇರಿದ ಮೇಲೆ ವ್ಯಭಿಚಾರದ ವಸ್ತುಗಳಾಗಿ ಬಾಳುವುದೇ ಅವರ ಹಣೆಬರಹವಾಗಿತ್ತು. ಇದು ನಿಚ್ಚಳವಾಗಿ ತಿಳಿದಿದ್ದರೂ ರಾಜಪುಠಾಣದ ಎಲ್ಲ ರಜಪೂತ ರಾಜರು ತಮ್ಮ ಹೆಣ್ಣು ಮಕ್ಕಳನ್ನು ಅಕ್ಬರನಿಗೆ ಒಪ್ಪಿಸಿ ಧನ್ಯರೆನಿಸಿಕೊಂಡವರೇ. ಮೇವಾಡ ಮಾತ್ರ ಇದಕ್ಕೆ ಹೊರತಾಗಿ ನಿಂತು ಸ್ವಾಭಿಮಾನವನ್ನು ಮೆರೆಯಿತು. ಅಂತೆಯೇ ಪ್ರಾಣಕ್ಕಿಂತಲೂ ಮಾನವೇ ಮೇಲು ಎಂದು ನಂಬಿದ ಇನ್ನು ಕೆಲವು ಕುಲೀನ ಸ್ತ್ರೀಯರು ಸಾಮೂಹಿಕವಾಗಿ ಬೆಂಕಿಗೆ ಹಾರಿ ಜೋಹರ್ ಮಾಡಿಕೊಂಡಿದ್ದು ಜಗತ್ಪ್ರಸಿದ್ಧ. ಆಕ್ರಮಣ ಮಾಡಿದ ಅನೇಕ ಕೋಟೆಗಳಲ್ಲಿ ಕೊನೆಯಲ್ಲಿ ಅಕ್ಬರ್​ನಿಗೆ ದರ್ಶನ ನೀಡಿದ್ದು ಈ ಜೋಹರ್ ಚಿತೆಗಳೇ!

ಹೊಸ ಮತದ ಕನಸು: ಅಕ್ಬರನನ್ನು ನಮ್ಮ ಚರಿತ್ರೆಕಾರರು-ನೆಹರು ಅವರನ್ನೂ ಸೇರಿಸಿಕೊಂಡು- ದಿ ಗ್ರೇಟ್ ಎಂದು ಕರೆಯಲು ಒಂದು ಮುಖ್ಯ ಕಾರಣ ಅವನು ಸ್ಥಾಪಿಸಿದ ‘ದೀನ್ ಇಲಾಹಿ’ ಎಂಬ ಪಂಥ. ಇದೊಂದು ದೊಡ್ಡ ಪ್ರಹಸನವೆನ್ನಬೇಕು. ಅಕ್ಬರ್ ದಿ ಗ್ರೇಟ್ ಸ್ಥಾಪಿಸಿದ ದೀನ್ ಇಲಾಹಿ ಸರ್ವಮತ ಸಮತ್ವಕ್ಕೆ ಸೆಕ್ಯುಲರ್ ಸಿದ್ಧಾಂತಕ್ಕೆ ಕಿರೀಟಪ್ರಾಯವೆಂದೂ ಇದು ಅಕ್ಬರನು ಜಗತ್ತಿಗೆ ನೀಡಿದ ಮಹಾಕೊಡುಗೆ ಎಂದೂ ನಮ್ಮ ದೇಸೀ ಚರಿತ್ರೆಕಾರರು ಹಾಡಿಹೊಗಳಿ ಅಟ್ಟಕ್ಕೇರಿಸಿದ್ದಾರೆ.

ಅಕ್ಬರ್ ಎಲ್ಲ ದುಷ್ಟ ಪದ್ಧತಿಗಳಿಂದ ಸಾಮ್ರಾಜ್ಯ ವನ್ನು ಭದ್ರಪಡಿಸಿಕೊಂಡ ನಂತರ ತಾನು ದೈವಾಂಶ ಸಂಭೂತನೆಂದೂ ಸರ್ವಶಕ್ತನೆಂದೂ ನಂಬಲಾರಂಭಿಸಿದ. ತಾನೊಂದು ಹೊಸ ಮತವನ್ನು ಸ್ಥಾಪಿಸಬೇಕೆಂದೂ ಅದರಲ್ಲಿ ಎಲ್ಲ ಮತ ಗಳವರೂ ತಂತಮ್ಮ ಮೂಲಮತವನ್ನು ಮರೆತು ಒಂದಾಗಬೇಕೆಂದೂ ಕನಸು ಕಂಡ. ಅದನ್ನು ಸಾರಲು 1579ರಲ್ಲಿ ವಿವಿಧ ಮತಾಧಿಕಾರಿಗಳು, ಸೈನ್ಯಾಧಿಕಾರಿಗಳು, ರಾಜ ಪ್ರಮುಖರನ್ನು ಒಂದು ಉನ್ನತ ಮಟ್ಟದ ಸಭೆಗೆ ಆಹ್ವಾನಿಸಿ ಅಲ್ಲಿ ತನ್ನ ಪರಿಕಲ್ಪನೆಯನ್ನು ಜಾಹೀರುಪಡಿಸಿದ. ಇದರಲ್ಲಿ ಹಿಂದು ಮತಾಚಾರ್ಯರಾರೂ ಸೇರಲಿಲ್ಲವೆಂಬುದು ಗಮನಾರ್ಹ. ಆದರೆ ಅಕ್ಬರ್ ಇಸ್ಲಾಂ, ಹಿಂದು, ಕ್ರೖೆಸ್ತ, ಪಾರ್ಸಿ, ಜೈನ ಮುಂತಾದ ಮತಗಳಿಂದ ಕೆಲ ಅಂಶಗಳನ್ನು ಗುಡ್ಡೆ ಹಾಕಿ ಕಲಸುಮೇಲೋಗರ ಮಾಡಿ ಅದಕ್ಕೆ ದೀನ್ ಇಲಾಹಿ ಎಂದು ನಾಮಕರಣ ಮಾಡಿದ.

ಈ ಮತಕ್ಕೆ ಸೇರುವವರು ಚಕ್ರವರ್ತಿ ಹಾಗೂ ಮತ ಪ್ರವರ್ತಕ ಅಕ್ಬರ್ ಬಾದಷಹರ ಮುಂದೆ ನಾಲ್ಕು ಸಂಗತಿಗಳನ್ನು ಸಮರ್ಪಿಸಿಕೊಳ್ಳಬೇಕಿತ್ತಂತೆ. ಆಸ್ತಿ, ಜೀವನ, ಗೌರವ ಮತ್ತು ಅವನ ಮತ. ತನ್ನ ಬಳಿ ಅದ್ಭುತ ಶಕ್ತಿಗಳಿವೆ ಎಂದೂ, ಬಂಜೆಯರಿಗೆ ಸಂತಾನ ಪ್ರಾಪ್ತಿಯಾಗುವುದೆಂದೂ, ತನ್ನ ಪಾದ ತೊಳೆದ ನೀರಿನಿಂದ ಸಕಲ ರೋಗರುಜಿನಗಳು ವಾಸಿಯಾಗುತ್ತವೆಂದೂ ಭಾರಿ ಪ್ರಚಾರ ಮಾಡಿಸಿದ. ಆದರೆ ಇದಕ್ಕೆ ದೊರೆತ ಪ್ರತಿಸ್ಪಂದನ ಹೇಳಿಕೊಳ್ಳುವಂತಹುದೇನೂ ಆಗಿರಲಿಲ್ಲ. ಅಕ್ಬರ್​ನ ದೀನ್ ಇಲಾಹಿ ಮತಕ್ಕೆ ಸೇರಿಕೊಂಡವರು 18 ಮಂದಿ ಆಸ್ಥಾನಿಕರು ಎಂದು ‘ಐನ್-ಇ-ಅಕ್ಬರಿ’ಯಲ್ಲಿ ತಿಳಿಸಲಾಗಿದೆ. ಬೀರ್​ಬಲ್ ಮಾತ್ರ ಹಿಂದು. ಉಳಿದ 17 ಮಂದಿ ಮುಸಲ್ಮಾನರು. ದೀನ್ ಇಲಾಹಿ ಸೇರಿದವರು ‘ಅಲ್ಲಾ ಹು ಅಕ್ಬರ್’ ಎಂದು ಪರಸ್ಪರ ನಮಿಸಿಕೊಳ್ಳಬೇಕಿತ್ತು.

ಆ ಸಂದಿಗ್ಧ ವಾಕ್ಯದ ಅರ್ಥ ದೇವರು ದೊಡ್ಡವನು ಅಥವಾ ಅಕ್ಬರನೇ ದೇವರು ಎಂದಾಗುತ್ತದೆ. ಆ ಪದಗಳನ್ನು ಕುರಿತು ವಿವಾದ ಎದ್ದರೂ ಅವನು ಅದನ್ನು ಬದಲಾಯಿಸಲು ಒಪ್ಪಲಿಲ್ಲ.

ಮತ ಸಹಿಷ್ಣುತೆ ಎಂಬುದು ಅಕ್ಬರನ ಪ್ರಾಣವಾಗಿತ್ತೆಂದು ಅಬುಲ್ ಫಜಲ್ ಎಷ್ಟೇ ಹೇಳಿದರೂ, ವಿನ್ಸೆಂಟ್ ಸ್ಮಿತ್ ಮಾತ್ರ ಅಕ್ಬರನು ಮತ ಅಸಹಿಷ್ಣುತೆಯಿಂದ ಕೂಡಿದ್ದ ಬಹಳ ಕೆಟ್ಟ ಕೆಲಸಗಳನ್ನು ಮಾಡಿದ ಎಂದು ತನ್ನ Akbar The Great Mogul 159ನೇ ಪುಟದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ದೀನ್ ಇಲಾಹಿ ಹುಟ್ಟಿನಿಂದ ಇಸ್ಲಾಂಗೆ ಹೆಚ್ಚು ಹಾನಿಯಾಯಿತೆಂದೂ, ಹೆಚ್ಚಿನ ಕಿರುಕುಳಕ್ಕೆ ಒಳಗಾದವರು ಮುಸಲ್ಮಾನರೆಂದೂ, ಐದಾರು ವರ್ಷಗಳ ಅವಧಿಯಲ್ಲಿ ಅವನ ಹೃದಯದಲ್ಲಿ ಮಹಮ್ಮದೀಯ ಭಾವನೆಗಳು ಲವಲೇಶವೂ ಇಲ್ಲದಾಯಿತೆಂದೂ ಅಕ್ಬರನ ಸಮಕಾಲೀನ ಚರಿತ್ರೆಕಾರ ಬದೌನಿ ಹೇಳಿದ್ದಾನೆ.

Akbar The Great Mogulನಲ್ಲಿ ವಿನೆ್ಸೆಂಟ್ ಸ್ಮಿತ್ ಈ ಕುರಿತು ಇನ್ನಷ್ಟು ಬೆಳಕು ಚೆಲ್ಲಿದ್ದಾನೆ. ಹುಟ್ಟುವ ಮಗುವಿಗೆ ಮಹಮ್ಮದ್ ಎಂದು ಹೆಸರಿಡಲು ಅವಕಾಶವಿರಲಿಲ್ಲ. ಮೊದಲೇ ಆ ಹೆಸರು ಇಟ್ಟಿದ್ದರೆ ಅದನ್ನು ಬದಲಾಯಿಸಬೇಕಿತ್ತು. ಹೊಸ ಮಸೀದಿಗಳನ್ನು ಕಟ್ಟುವಂತಿರಲಿಲ್ಲ. ಹಳೆಯ ಮಸೀದಿಗಳ ದುರಸ್ತಿ ಅಥವಾ ಪುನರುಜ್ಜೀವನಕ್ಕೆ ಅವಕಾಶವಿರಲಿಲ್ಲ. ಆನಂತರದ ದಿನಗಳಲ್ಲಿ ಮಸೀದಿಗಳನ್ನು ನೆಲಸಮ ಮಾಡಲಾಯಿತು. ಗಡ್ಡ ಬೋಳಿಸಬೇಕು. ಪ್ರಾರ್ಥನೆ, ರಂಜಾನ್, ಉಪವಾಸ, ಮೆಕ್ಕಾ ಯಾತ್ರೆ ನಿಷಿದ್ಧ. ಅರಬ್ಬೀ ಭಾಷೆ, ಮಹಮ್ಮದೀಯ ಕಾನೂನು, ಕುರಾನ್ ಪಠಣಕ್ಕೂ ಅವಕಾಶವಿರಲಿಲ್ಲ.

ಅಕ್ಬರ್​ನ ದೀನ್ ಇಲಾಹಿ ಎಂಬ ಪ್ರಹಸನ ತಾತ್ಕಾಲಿಕವಾಗಿ ತಲೆ ಎತ್ತಿ ಕೆಲ ವರ್ಷಗಳಲ್ಲಿ ಹೇಳಹೆಸರಿಲ್ಲದಾಯಿತು. ಈ ವಿಷಯದಲ್ಲಿ ಮಹಮ್ಮದ್ ತೊಗಲಖನಂತೆ ಇವನೂ ಪ್ರಯೋಗ ಮಾಡಿದನೆನ್ನಬಹುದು. ಲಕ್ಷ ಲಕ್ಷ ಸಂಖ್ಯೆಯಲ್ಲಿ ಅಮಾಯಕ ಸ್ತ್ರೀ, ಪುರುಷ ಶಿಶುಗಳ ಮಾರಣಹೋಮ ಮಾಡಿದವನು, ಸ್ತ್ರೀಯರ ಜೋಹರ್​ಗಳಿಗೆ ಕಾರಣಪುರುಷನೂ ಆದ ಅಕ್ಬರ್​ನನ್ನು ನಮ್ಮ ಮೇಧಾವಿ ಚರಿತ್ರೆಕಾರರು ‘ದಿ ಗ್ರೇಟ್’ ಎಂದು ಕರೆದು ಇತಿಹಾಸಕ್ಕೆ ಮತ್ತು ಸತ್ಯಕ್ಕೆ ಅಪಚಾರವೆಸಗಿದ್ದಾರೆ.

ಇಂಥ ವ್ಯಕ್ತಿಯೊಂದಿಗೆ ಮಹಾರಾಣಾ ಪ್ರತಾಪ ಸಿಂಹನನ್ನು ತುಲನೆ ಮಾಡುವುದಂತೂ ಸಾಧ್ಯವಿಲ್ಲದ ಸಂಗತಿ. ಆದರೆ ಯಾರು ಗ್ರೇಟ್ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ರಾಣಾ ಪ್ರತಾಪನ ಜೀವನ, ಕಾರ್ಯ ಮತ್ತು ಅವನ ಸ್ಥಿತಿಗತಿಗಳನ್ನು ಪರಿಶೀಲಿಸುವುದು ಅಗತ್ಯ.

(ಮುಂದುವರಿಯುವುದು)

(ಲೇಖಕರು ಹಿರಿಯ ಪತ್ರಕರ್ತರು)

ePaperLink: http://epapervijayavani.in/Details.aspx?id=22007&boxid=14843772
y g 2

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s